ಭಾನುವಾರ, ನವೆಂಬರ್ 1, 2009

ಕಳೆದು ಹೋಗದ ಕನಸು.


ಅಂದಿನ ನಿನ್ನ ನೆನಪುಗಳೆಲ್ಲಾ
ಒಮ್ಮೆನನ್ನ ಸೋಲಿನ ಸುಂಟರಗಾಳಿಗೆ ಸಿಲುಕಿ
ಕಣ್ಣಿಗೆ ಕಾಣದ ದೃಶ್ಯಗಳಾಗಿ
ಕಿವಿಗೆ ಕೇಳದ ಪಿಸುಮಾತುಗಳಾಗಿ
ಬೇಸರದ ಬಿರುಗಾಳಿಯಲ್ಲಿ ಬೆರೆತು ಹೋದವು .

ಮರೆಯಲಾಗದ ಮನಸನ್ನು
ಮರೆತೆನೆಂದು ಮುಂದೆ ನಡೆದರು
ನಾ ನಡೆವ ಹಾದಿಯಲೆಲ್ಲಾ
ನಿನ್ನದೇ ಹೆಜ್ಜೆ ಗುರುತುಗಳು.

ಮರೆವಿನಲ್ಲಿ ಮರೆಯಲಾಗದ
ಮನಸಿನಿಂದ ಅಳಿಸಲಾಗದ ಮಾತುಗಳು
ಪ್ರೀತಿಯ ಚಿಲುಮೆಯಾಗಿ ಕಣ್ತುಂಬಿಕೊಂಡು
ಹರಿದವು ಕನಸಿನ ಹನಿಗಳಾಗಿ .

ಬಯಸಿದ ಬಾಳಿನ ಬೆಳೆಗೆ ಹಾಯುವ ಮುನ್ನವೆ
ಸಂಬಂಧಗಳ ಶಾಖಕ್ಕೆ ಕನಸಿನಹನಿಗಳು ಆವಿಯಾಗಿ
ಭಾವನೆಗಳೆಲ್ಲಾ ಬಾನಿನೆಡೆಗೆ ಹೊರಟುಹೋಗಿ
ಕಾರ್ಮೋಡದ ಸೆರಮನೆ ಸೇರಿದವು.

ದಿನಗಳು ಕಳೆದಂತೆ ನೆನಪುಗಳು
ಕನಸಾಗಿ ಕಾಡಿ ಮನಸನ್ನು ಕಂಗೆಡಿಸಿ
ನಿನ್ನ ವಿಸ್ಮಯ ನಗೆಯ ನಲಿವಿನ ನೋಟದ
ಛಾಯೆ ಕಣ್ಣಲ್ಲಿ ಜಿನುಗಿ
ಸಂಚಲನದ ಮಿಂಚು ಸಂಚರಿಸಿ
ಭಾವ್ದೂವೇಗವಾಗಿ ಗುಡುಗಿ
ಮಳೆ ಬಿಲ್ಲ ರಂಗುರಂಗಿನ ಚಿತ್ತಾರದಿ
ಕಾರ್ಮೋಡದ ಸೇರಮನೆಯಿಂದ ಬಿಡುಗಡೆಗೊಂಡು .

ತಂಗಾಳಿಯ ಉಡುಗೊರೆಯೊಂದಿಗೆ ನಿನ್ನಾವರಿಸಿ
ನಿನ್ನ ಉಸಿರಲ್ಲಿ ಉಸಿರಾಗಿ
ನಿನ್ನ ಹೆಸರಲ್ಲಿ ಹೆಸರಾಗಿ
ಹಸಿರಲ್ಲಿ ಜೀವನ ಜಾರಿಗೊಳಿಸುವ
ನನ್ನ ಕನಸಿನ ಕಾತರ......ಮನಸಿನ ಆತುರ
ಇಂದು ನಿನ್ನೆಡೆಗೆ ಕರೆತಂದಿದೆ ನನ್ನ .